ಭಾರತದಲ್ಲಿ ವಿಜ್ಞಾನ - ಕನ್ನಡದಲ್ಲಿ ಆರ್ಯಭಟ ಖಗೋಳ ಗಣಿತಶಾಸ್ತ್ರದ ಕುರಿತು ಆರ್ಯಭಟ ‘ಆರ್ಯಭಟೀಯಂ’ ಎಂಬ ಗ್ರಂಥ ಬರೆದಿದ್ದಾನೆ. ಅದ್ಭುತ ಗಣಿತ ವಿಚಾರಗಳು ಹೊರಬಂದ ಮೇಲೆ ಭಾರತಕ್ಕೆ ಗಣಿತಲೋಕದಲ್ಲಿ ವಿಶ್ವಮಾನ್ಯತೆ ದೊರೆತಿದೆ. ಸಂತಸದ ಸುದ್ದಿ ಎಂದರೆ ಸಂಸ್ಕೃತ ಭಾಷೆಯಲ್ಲಿರುವ ಈ ಗ್ರಂಥ ಕನ್ನಡದಲ್ಲಿ ದೊರೆಯುತ್ತಿರುವುದು.
ಕೆಲ ತಿಂಗಳ ಹಿಂದೆ ಮುಂಬೈನಲ್ಲಿ ನಡೆದ ಇಂಡಿಯನ್ ಸೈನ್ಸ್ ಕಾಂಗ್ರೆಸ್ನಲ್ಲಿ, ಪ್ರಾಚೀನ ಭಾರತೀಯರಿಗೆ ಅನೇಕ ವೈಜ್ಞಾನಿಕ ಆವಿಷ್ಕಾರಗಳು ತಿಳಿದಿದ್ದವು, ಚರಕಸಂಹಿತೆಯಲ್ಲಿ ಶಸ್ತ್ರಚಿಕಿತ್ಸೆಯ ಪ್ರಸ್ತಾಪ ಬಂದಿದೆ ಎಂಬುದಾಗಿ ಕೆಲವರು ಹೇಳಿದರು. ತಕ್ಷಣ ಅನೇಕ ಆಧುನಿಕರೆನಿಸಿಕೊಳ್ಳುವವರು ಇವರನ್ನು ತರಾಟೆಗೆ ತೆಗೆದುಕೊಂಡರು. ಇದೆಲ್ಲ ಅಂತೆ-ಕಂತೆ. ಭಾರತದಲ್ಲಿ ಎಲ್ಲ ಇತ್ತು ಎಂದು ಬೊಗಳೆ ಬಿಡುವ ದುರಭಿಮಾನಿಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ ಇವರಿಗೆಲ್ಲ ವೈಜ್ಞಾನಿಕ ಮನೋಭಾವನೆ ಇಲ್ಲ ಎಂದು ಯಥಾಪ್ರಕಾರ ವಾಕ್ಪ್ರಹಾರ ಆರಂಭಿಸಿದರು. ಕೆಲ ವಿಜ್ಞಾನಿಗಳು, ಪ್ರಾಚೀನ ಭಾರತದ ಬಗ್ಗೆ ತಿಳಿವಳಿಕೆ ಉಳ್ಳವರು ಭಾರತದಲ್ಲಿ ಏನಿತ್ತು, ಏನಿರಲಿಲ್ಲ ಎಂಬುದನ್ನು ಖಚಿತವಾಗಿ ಹೇಳಲು ಪ್ರಯತ್ನಿಸಿದರಾದರೂ ಖಂಡನಕಾರರ ದೊಡ್ಡಗಂಟಲಿಗೆ ಹೆಗಲೆಣೆಯಾಗದೆ ಸೋತರು. ರಾಷ್ಟ್ರೀಯ ಸುದ್ದಿವಾಹಿನಿಗಳು/ದೃಶ್ಯಮಾಧ್ಯಮಗಳು ಇಂಥ ಅವಕಾಶವನ್ನು ಬಿಟ್ಟಾವೆಯೇ? ಇದೇ ವಿಷಯವನ್ನು ಯಥಾಶಕ್ತಿ ಚಚ್ಚಿ ಕೆಡವಲು ಶುರು ಹಚ್ಚಿಕೊಂಡರು.
ತಮಾಷೆ ಎಂದರೆ ಬಹಳಷ್ಟು ಮಂದಿಗೆ ಅದರಲ್ಲೂ ಮೀಡಿಯಾ ಮಂದಿಗೆ ಪ್ರಾಚೀನ ಭಾರತೀಯ ವೈಜ್ಞಾನಿಕ ಪ್ರಗತಿಯ ಬಗ್ಗೆ ಏನೇನೂ ಗೊತ್ತಿಲ್ಲ. ವಿಜ್ಞಾನ ಏನಿದ್ದರೂ ಅದೆಲ್ಲ ಪಶ್ಚಿಮದಿಂದಲೇ ಬಂದದ್ದು ಎಂಬ ನಿಶ್ಚಯಬುದ್ಧಿ ಅವರದು! ಇನ್ನು ಇಂಥವರು ಚರ್ಚೆಗೆ ಕರೆಯುವುದು ಅವರಿಗೆ ತಿಳಿದ ಕೆಲವು ಹರಟೆಮಲ್ಲರನ್ನು. ಅವರು ರಾಜಕೀಯ, ದೇಶವಿದೇಶಗಳ ವ್ಯವಹಾರ, ವಾಣಿಜ್ಯ, ಇತ್ಯಾದಿ ಎಲ್ಲದರ ಬಗ್ಗೆಯೂ ಬಡಬಡಿಸುವ ಬಡಾ ಮಾತುಗಾರರು. ಅವರಲ್ಲಿ ಒಬ್ಬ ಬುದ್ಧಿವಂತರು ಹೀಗೆಂದರು- ‘ವಿಜ್ಞಾನ ಬರಹ ಸಂಸ್ಕೃತ ಭಾಷೆಯಲ್ಲಿದೆ ಎನ್ನುತ್ತಾರೆ. ಅದೆಲ್ಲ ಶ್ಲೋಕರೂಪದಲ್ಲಿರುತ್ತದಂತೆ. ವಿಜ್ಞಾನವನ್ನು ಹೀಗೆ ಬರೆದರೆ ಯಾರಿಗೆ ಅರ್ಥವಾಗುತ್ತದೆ’ ಇತ್ಯಾದಿ. ಇವರ ಈ ಮಾತಿಗೆ ಆಂಕರ್ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ‘ಮೀಕೆಕ್ಕಡ ಸಂದೇಹಮೊ ಮಾಕಿ ಅಕ್ಕಡೆ’ ಪರಿಸ್ಥಿತಿ. ಈ ಕಾರ್ಯಕ್ರಮ ನೋಡಿ ಅಳಬೇಕೋ ನಗಬೇಕೋ ತಿಳಿಯಲಾಗದ ಸ್ಥಿತಿ ನೋಡುಗರದ್ದು.
ದಿನದಿನವೂ ನಮ್ಮ ಚಾನಲ್ಗಳಲ್ಲಿ ನಡೆಯುವ ಈ ಉದ್ಭೋದಕ(?) ದೃಶ್ಯಾವಳಿಯನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವಿಲ್ಲದಿಲ್ಲ. ಭಾರತದಲ್ಲಿ ವಿಜ್ಞಾನಸಾಹಿತ್ಯ, ಕಾವ್ಯಗಳು, ಮಾನವಿಕಶಾಸ್ತ್ರಗಳು, ವೈದ್ಯಶಾಸ್ತ್ರ, ಗಣಿತಶಾಸ್ತ್ರ ಇತ್ಯಾದಿ ಎಲ್ಲ ಶ್ಲೋಕರೂಪದಲ್ಲೇ ಇರೋದು. ಶೇ.90ರಷ್ಟು ಸಾಹಿತ್ಯ ಪದ್ಯರೂಪದಲ್ಲಿದೆ. ಅಂದಮೇಲೆ ಕಾರಣವೂ ಪ್ರಬಲವಾಗಿರಬೇಕು. ಕಡಿಮೆ ಪದಗಳ ಮೂಲಕ ಹೆಚ್ಚು ವಿಷಯವನ್ನು ಹೇಳಲು ಬರುತ್ತದೆ. ಪದಬಳಕೆಯ ಎಕಾನಮಿಗೆ ಶ್ರೇಷ್ಠ ಉದಾಹರಣೆ. ಇಡೀ ಒಂದು ಶಾಸ್ತ್ರದ ಪ್ರಮುಖ ಪ್ರಮೇಯಗಳನ್ನೆಲ್ಲ ಕೆಲವೇ ಕೆಲವು ಪದ್ಯಗಳಲ್ಲಿ ಅಚ್ಚುಕಟ್ಟಾಗಿ ಅಡಕ ಮಾಡಿಬಿಡಬಹುದು. ಇವು ಗಣಿತಶಾಸ್ತ್ರದ ಫಾಮುಲಾಗಳಿದ್ದ ಹಾಗೆ.
‘ಆರ್ಯಭಟ’- ಈ ಭಾರತೀಯ ಗಣಿತಜ್ಞನ ಹೆಸರು ಕೇಳದವರಾರು! ಆಧುನಿಕ ಕಾಲದಲ್ಲಿ ರಾಮಾನುಜನ್ ಹೆಸರಿದ್ದಂತೆ. ಭಾರತಕ್ಕೆ ಕೀರ್ತಿಕಲಶವಿಟ್ಟ ಗಣಿತಶಿರೋಮಣಿಗಳಿವರು. ನಮ್ಮ ದೇಶದ ಮೊದಲ ಉಪಗ್ರಹದ ಹೆಸರು ಆರ್ಯಭಟ. ಯಾಕೆ ಹೇಳಿ? ಜಗತ್ಪ್ರಸಿದ್ಧ ಭಾರತೀಯ ಖಗೋಳಗಣಿತಜ್ಞ ಆರ್ಯಭಟ.
ಖಗೋಳ ಗಣಿತಶಾಸ್ತ್ರದ ಕುರಿತು ಆರ್ಯಭಟ ಗ್ರಂಥ ಬರೆದಿದ್ದಾನೆ. ಇದಕ್ಕೆ ‘ಆರ್ಯಭಟೀಯಂ’ ಎಂದೇ ಹೆಸರು. ಈ ಗ್ರಂಥದಲ್ಲಿನ ಅದ್ಭುತ ಗಣಿತ ವಿಚಾರಗಳು ಹೊರಬಂದ ಮೇಲೆ ಭಾರತಕ್ಕೆ ಗಣಿತಲೋಕದಲ್ಲಿ ವಿಶ್ವಮಾನ್ಯತೆ ದೊರೆತಿದೆ. ಇಂದು ಜಗತ್ತಿನಲ್ಲೆಲ್ಲ ಪ್ರಚಾರದಲ್ಲಿರುವ ದಶಮಾಂಶ ಪದ್ಧತಿ ಸೇರಿದಂತೆ ಅನೇಕ ಮೂಲಭೂತ ಗಣಿತೀಯ ಆವಿಷ್ಕಾರಗಳನ್ನು ದಾಖಲಿಸುವ ಗ್ರಂಥ ‘ಆರ್ಯಭಟೀಯಂ’. ಸಂಸ್ಕೃತ ಭಾಷೆಯಲ್ಲಿರುವ ಆರ್ಯಭಟನ ಗ್ರಂಥದ ಪ್ರಮುಖ ವಿಚಾರಗಳನ್ನು ಗಣಿತಜ್ಞರು ಈಗಾಗಲೇ ಬೆಳಕಿಗೆ ತಂದಿದ್ದಾರೆ. ‘ಭೂಗೋಲಃ ಸರ್ವತೋ ವೃತ್ತಃ’, ಭೂಮಿ ಗುಂಡಾಗಿದೆ ಎಂದು ಮೊದಲ ಬಾರಿಗೆ ಸ್ಪಷ್ಟಪಡಿಸಿದ ಗಣಿತಜ್ಞ ಆರ್ಯಭಟ.
ಸಂತಸದ ಸುದ್ದಿ ಎಂದರೆ ಈಗ ಸಂಪೂರ್ಣ ಆರ್ಯಭಟೀಯಂ ಕನ್ನಡದಲ್ಲಿ ದೊರೆಯುತ್ತಿರುವುದು. ಈ ಗಣಿತಗ್ರಂಥ ಕನ್ನಡದಲ್ಲಿ ಬಂದಿರುವುದರಿಂದ ಪಾರಿಭಾಷಿಕವಾದ ವೈಜ್ಞಾನಿಕ, ಗಣಿತಶಾಸ್ತ್ರೀಯ ಪದಗಳು ಕನ್ನಡಕ್ಕೆ ಬಂದು, ಕನ್ನಡದ ಶಬ್ದಸಂಪತ್ತು ಹೆಚ್ಚಿದೆ. ಕನ್ನಡ ಪ್ರೌಢವಾಗಿದೆ. ಕನ್ನಡದಲ್ಲೇ ವಿಜ್ಞಾನವನ್ನು ಅರಿಯಬೇಕು ಎನ್ನುವವರಿಗೆ ವರವೋ ಎಂಬಂತಿವೆ ಈ ರೀತಿಯ ಪುಸ್ತಕಗಳು.
‘ಆರ್ಯಭಟೀಯಂ’ 121 ಶ್ಲೋಕಗಳಿರುವ ಸೂತ್ರರೂಪದ ಪುಟ್ಟಗ್ರಂಥ. ಬಾಲಚಂದ್ರ ರಾವ್ ಅವರು 170 ಪುಟಗಳಲ್ಲಿ ಸರಳಕನ್ನಡ ಅನುವಾದದ ಜತೆಗೆ, ಗಣಿತಾಂಶಗಳ ಅರ್ಥವತ್ತಾದ ವಿವರಗಳನ್ನು ನೀಡಿದ್ದಾರೆ. ಜತೆಗೆ ಅಲ್ಲಲ್ಲಿ ಈಗಿನ ಇಂಗ್ಲಿಷ್ ಪದಗಳನ್ನು ಕೊಟ್ಟಿದ್ದಾರೆ.
ಉದಾ: ನಾಕ್ಷತ್ರಿಕ ದಿನ- Sidereal day, ಭಚಕ್ರ- Zodiac, ಸೌರ ವರ್ಷ- Solar year, ಜ್ಯೋತ್ಪತ್ತಿ ವಿಧಾನ- Procedure for generating sine values, ಕುಟ್ಟಕ ಗಣಿತ - First order indeterminate equations. ಆರ್ಯಭಟನು ತನ್ನ ಕಾಲ (ಕ್ರಿ.ಶ. 5ನೇ ಶತಮಾನ) ಮತ್ತು ಊರಿನ ಬಗ್ಗೆ ಸೂಚಿಸಿರುವುದು ತುಂಬ ವಿಶೇಷ. ಈ ಕೃತಿಯನ್ನು ಬರೆದಾಗ ಆತನಿಗೆ 23 ವರ್ಷ. ಕುಸುಮಪುರದಲ್ಲಿ ಪ್ರಸಿದ್ಧವಾಗಿದ್ದ ಖಗೋಳಜ್ಞಾನವನ್ನು ತನ್ನ ಕೃತಿಯಲ್ಲಿ ಪ್ರಚುರಪಡಿಸಿದುದಾಗಿ ಹೇಳಿದ್ದಾನೆ. ಕುಸುಮಪುರ ಎಂದರೆ ಪಾಟಲೀಪುತ್ರ. ಆಚಾರ್ಯ ಚಾಣಕ್ಯ, ಬುದ್ಧದೇವ ಮುಂತಾದ ಭಾರತದ ಪ್ರಾಚೀನ ಧೀಮಂತರ ನಾಡು ಇಂದಿನ ಪಟನಾ. ಹಿಮಾಲಯದ ಎತ್ತರದಲ್ಲಿದ್ದ ಬಿಹಾರ ಈಗ ಯಾವ ಪ್ರಪಾತಕ್ಕೆ ಬಿದ್ದಿದೆ ಗಮನಿಸಿ!
ಆರ್ಯಭಟನೊಬ್ಬ ಖಗೋಳಗಣಿತಜ್ಞ- Mathematician Astronomer. ಗಣಿತದ ದೃಷ್ಟಿಯಿಂದ ಈತನ ಮಹತ್ವದ ಒಂದು ಕೊಡುಗೆ ಎಂದರೆ ಕೋನಗಳ ‘ಜ್ಯಾ’(ಸೈನ್)ಪಟ್ಟಿಯನ್ನು ತಯಾರಿಸುವ ವಿಧಾನವನ್ನು ಕೇವಲ ಒಂದು ಶ್ಲೋಕದಲ್ಲಿ ನೀಡಿರುವುದು. ಇನ್ನೂ ಹೆಚ್ಚಿನ ಕೊಡುಗೆ ಎಂದರೆ ಮಾದರಿಯ ಮೊದಲ ದರ್ಜೆಯ ಅನಿರ್ದಿಷ್ಟ ಸಮೀಕರಣದ ಸಾರ್ವತ್ರಿಕ ಪರಿಹಾರದ ವಿಧಾನ. ವಿಶ್ವಗಣಿತದ ಇತಿಹಾಸದಲ್ಲಿ ಇಂತಹ ಕೊಡುಗೆಯನ್ನು ಮೊಟ್ಟಮೊದಲಿಗೆ ನೀಡಿದ ಕೀರ್ತಿ ಆಚಾರ್ಯ ಆರ್ಯಭಟನಿಗೆ ಸಲ್ಲುತ್ತದೆ. ಆರ್ಯಭಟನು ಚಂದ್ರ, ಸೂರ್ಯಗ್ರಹಣಗಳ ಕಾರಣ, ಗ್ರಸ್ತ ಚಂದ್ರನ ಬಣ್ಣ, ಗ್ರಸ್ತಭಾಗದ ಪರಿಮಾಣ, ಕಾಲ ಇತ್ಯಾದಿ ಖಗೋಳಾಂಶಗಳನ್ನು ಸ್ಪುಟವಾಗಿ ನಿರೂಪಿಸಿದ್ದಾನೆ.
ಇಂದು ನಾವು ನಮ್ಮ ನಿತ್ಯ ಬಳಕೆಯಲ್ಲಿಟ್ಟುಕೊಂಡಿರುವ ತಿಥಿ, ವಾರ, ನಕ್ಷತ್ರ ಮುಂತಾದ ಕಾಲಮಾನಗಳ ಲೆಕ್ಕಾಚಾರದಲ್ಲಿ ಯಾವ ಅಂಶ ಇಲ್ಲಿಯದು, ಬೇರೆಡೆಗಳಿಂದ ಭಾರತಕ್ಕೆ ಬಂದದ್ದು ಯಾವುದು, ಇಲ್ಲಿಂದ ಅಲ್ಲಿಗೆ ಹೋದದ್ದು ಯಾವುದು ಎಂಬ ಸ್ವಾರಸ್ಯಕರ ಅಂಶಗಳ ಕಡೆಗೂ ಬೆಳಕು ಚೆಲ್ಲಿರುವುದು ಬಾಲಚಂದ್ರರಾಯರ ಕೃತಿಯ ಹೆಗ್ಗಳಿಕೆ. ಉದಾಹರಣೆಗೆ ಇಂದು ನಾವು ಬಳಸುವ ವಾರದ ಏಳು ಹೆಸರುಗಳು.ಇದನ್ನು ಸ್ಪಷ್ಟಪಡಿಸಲು ‘ವಾರ’ದ ಇತಿಹಾಸವನ್ನೇ ನೀಡಿದ್ದಾರೆ (ಪು.101).
ದಿನ, ಪಕ್ಷ, ಮಾಸ, ವರ್ಷಗಳು ನೈಸರ್ಗಿಕ ಘಟನೆಗಳನ್ನಾಧರಿಸಿವೆ. ಆದರೆ ವಾರ ವ್ಯವಸ್ಥೆ ಮಾತ್ರ ಕೃತ್ರಿಮ-ಮಾನವನಿರ್ವಿುತ. ಗ್ರಹಗಳನ್ನು ಆಧರಿಸಿ ವಾರದ ದಿನಗಳನ್ನು ಹೆಸರಿಸುವ ಪದ್ಧತಿ ಈಜಿಪ್ಟ್ನಲ್ಲಿ ಮೊದಲಾಯಿತು. ನಾವು ತಿಳಿದಿರುವಂತೆ ಗ್ರೀಸ್ನಲ್ಲಿ ಅಲ್ಲ (ಭಾರತಕ್ಕೆ ಚಾಲ್ಡಿಯಾದಿಂದ ಈ ಪದ್ಧತಿ ಬಂದಿದೆ). ಏಕೆಂದರೆ ಪ್ರಾಚೀನ ಗ್ರೀಸ್ನಲ್ಲಿ ಪ್ರತಿಮಾಸದಲ್ಲಿ 10 ದಿನಗಳ ಮೂರು ವಾರಗಳ ಬಳಕೆ ಇತ್ತು. ಅಲೆಕ್ಸಾಂಡರನು ಈಜಿಪ್ಟನ್ನು ಗೆದ್ದನಂತರ, ಗ್ರೀಸ್ನಲ್ಲಿ 7ದಿನಗಳ ಸಪ್ತಾಹ ಬಳಕೆಗೆ ಬಂತು. ಪ್ರತಿವಾರಕ್ಕೂ ಗ್ರಹವೊಂದನ್ನು ಪ್ರತಿನಿಧಿಸುವ ದೇವರ ಹೆಸರಿನಿಂದ ಕರೆಯಲಾಗಿ ಹೀಲಿಯೋವ್ (ಸೂರ್ಯ), ಸೆಲೆನಿಸ್ (ಚಂದ್ರ-ಸೋಮ) ಮುಂತಾದ ಹೆಸರುಗಳಾದವು. ಭಾರತದಲ್ಲಿ ವಾರದ ದಿನಗಳ ಹೆಸರಿನ ಬಗ್ಗೆ ದೊರಕಿರುವ ಅತ್ಯಂತ ಪ್ರಾಚೀನ ಶಿಲಾಶಾಸನ ಎಂದರೆ, ಗುಪ್ತರ ಕಾಲಕ್ಕೆ ಸೇರಿದ (ಕ್ರಿ.ಶ. 484) ಬುಧಗುಪ್ತನ ಶಾಸನ. ಗುರುವಾರ, ಆಷಾಢ ಶುಕ್ಲ ದ್ವಾದಶಿ ತಿಥಿ ಎಂದಿದೆ.
ಒಟ್ಟಿನಲ್ಲಿ ವಾರಗಳ ಹೆಸರು ಕೃತ್ರಿಮ ವ್ಯವಸ್ಥೆಯಾಗಿರುವುದರಿಂದ, ಕೆಲವು ವಾರಗಳು ಒಳ್ಳೆಯವು ಕೆಲವು ಅಶುಭ ಎಂದು ನಂಬುವುದು ಮೂಢನಂಬಿಕೆಯೆಂದು ಬಾಲಚಂದ್ರರಾಯರು ನಿರ್ಣಯಿಸಿದ್ದಾರೆ.
ಒಂದು ದಿನದಲ್ಲಿ 24 ಗಂಟೆಗಳು ಇವೆ ಎಂಬ ಪರಿಕಲ್ಪನೆ ಎಂದಿನಿಂದ ಬಂದದ್ದು? ವರಾಹಮಿಹಿರನು 60 ನಿಮಿಷಗಳ ಈ ಕಾಲಮಾನವನ್ನು ‘ಹೋರಾ’ ಎಂದು ಹೇಳಿ ಅದರ ನಿಷ್ಪತ್ತಿಯನ್ನು ನೀಡುತ್ತಾನೆ. ‘ಅಹೋರಾತ್ರಿ’ಯಲ್ಲಿ ಮೊದಲ ಕೊನೆಯ (ಆದಿ-ಅಂತ್ಯ) ಅಕ್ಷರಗಳನ್ನು ಬಿಟ್ಟರೆ ಉಳಿಯುವುದು ಹೋರಾ! ಜಟ್ಠ್ಟ ಇದೂ ಗ್ರೀಕರ ‘ಜಟ್ಟಟ್ಞ’ನ ಸಂಸ್ಕೃತರೂಪ. ಈ ಸಂಸ್ಕೃತ ನಾಮಕರಣವೂ ಬಹುಸ್ವಂತಿಕೆಯಿಂದ, ಜಾಣ್ಮೆಯಿಂದ ಕೂಡಿದೆ. ಪಾಣಿನಿ ವ್ಯಾಕರಣಶಾಸ್ತ್ರದಲ್ಲಿ ಆದಿ-ಅಂತ್ಯಗಳನ್ನು ಸೇರಿಸಿದರೆ ಅವು ಮಧ್ಯದ ಅಕ್ಷರಗಳಿಗೂ ಸಂಜ್ಞೆಯಾಗುತ್ತದೆ ಎಂದು ಸೂತ್ರವನ್ನೇ ವಿಧಿಸಿದ-‘ಆದಿರಂತ್ಯೇನ ಸಹೇತಾ’ ಎಂದು (ಅಚ್ ಎಂದರೆ-ಎಲ್ಲ ಸ್ವರಗಳು, ಹಲ್ ಅಂದರೆ-ಎಲ್ಲ ವ್ಯಂಜನಗಳು ಎಂಬುದು ಪ್ರಾಥಮಿಕ ಜ್ಞಾನ). ವರಾಹಮಿಹಿರನು ‘ಹೋರಾ’ ಮಾಡಲು ಆದಿ-ಅಂತ್ಯಗಳನ್ನು ಬಿಟ್ಟ!
ಕನ್ನಡಭಾಷೆಯನ್ನು ಬೆಳೆಸುವ, ಕನ್ನಡಿಗರ ಜ್ಞಾನ ದಿಗಂತವನ್ನು ವಿಸ್ತರಿಸುವ ಇಂಥ ಕೃತಿಗಳು ಬರುತ್ತಲೆ ಇವೆ. ಸಖೇದಾಶ್ಚರ್ಯವೆಂದರೆ ಇವು ಸಂಬಂಧಪಟ್ಟ, ಅಂದರೆ ಕನ್ನಡವನ್ನು ಉಳಿಸಿ ಬೆಳೆಸಲು ಟೊಂಕಕಟ್ಟಿ ನಿಂತಿರುವ(?) ವ್ಯಕ್ತಿಗಳ ಅಥವಾ ಸಂಸ್ಥೆಗಳ ಕಣ್ಣಿಗೆ ಕಾಣುವುದೇ ಇಲ್ಲ. ಇದನ್ನು ಜಾಣಕುರುಡು ಎನ್ನೋಣವೆ? ಕನ್ನಡನಾಡಿನಲ್ಲಿ ಇರುವಷ್ಟು ಸಾಹಿತ್ಯ ಪ್ರಶಸ್ತಿಗಳು ಬಹುಶಃ ನಾನು ಕಂಡಂತೆ ಇನ್ನೆಲ್ಲೂ ಇಲ್ಲ. ಅನುವಾದ ಪ್ರಶಸ್ತಿಗಳೂ ಇವೆ. ಆದರೆ ಸಂಸ್ಕೃತದಿಂದ ಕನ್ನಡಕ್ಕೆ ಬರುವ ಇಂಥ ಅಮೂಲ್ಯ ಕೃತಿಗಳ ಹತ್ತಿರವೂ ಅವು ಸುಳಿಯುವುದಿಲ್ಲ! ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ ಇವರ್ಯಾರಿಗೂ ಕನ್ನಡ ಬೆಳೆಯುವುದು ಬೇಕಿಲ್ಲವೆ? ಪ್ರಶಸ್ತಿಗಳೆಲ್ಲ ಕಥೆ, ಕವನ, ಕಾದಂಬರಿ, ವಿಮರ್ಶೆ ಮುಂತಾದ ಬರವಣಿಗೆಗೆ ಮಾತ್ರ ಮೀಸಲಾಗಿರಬೇಕೆ? ಕಡೆಯಲ್ಲಿ ಒಂದು ಮಾತು-ದ್ವೇಷ, ಅಸೂಯೆಗಳಿಂದ ಪ್ರೇರಿತರಾಗಿ ಗುಣಗ್ರಹಣೆ ಮಾಡದಿರುವುದರಿಂದ ಕನ್ನಡಕ್ಕೆ ಕುತ್ತು ಎಂಬುದನ್ನು ಕನ್ನಡವೀರರು ಅರಿಯಬೇಕು.
ಭಾರತೀಯ ಗಣಿತ ಮತ್ತು ಖಗೋಳವಿಜ್ಞಾನದ ಐತಿಹಾಸಿಕ ಹಿನ್ನೆಲೆಯಿಂದ ಆರಂಭವಾಗುವ ಈ ಕನ್ನಡ ಪುಸ್ತಕ, ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ಒಂದು ಅಪೂರ್ವ ಕೊಡುಗೆ ಎಂದರೆ ಅತಿಶಯೋಕ್ತಿಯಲ್ಲ. ಡಾ. ಎಸ್. ಬಾಲಚಂದ್ರರಾವ್ ಸಕಲ ವಿವರಗಳೊಂದಿಗೆ ಬರೆದಿರುವ ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಕಳೆದ ವರ್ಷ ಭಾಸ್ಕರಾಚಾರ್ಯರ ‘ಲೀಲಾವತೀ ಗಣಿತಗ್ರಂಥದ 108 ಲೆಕ್ಕ’ಗಳನ್ನು ಕನ್ನಡದ ಮಡಿಲಲ್ಲಿಟ್ಟವರು ಇದೇ ಕೃತಿಕಾರ-ಪ್ರಕಾಶನ ಜೋಡಿ. ಈ ಜೋಡಿಗೆ ಒಂದು ಅಭಿನಂದನೆಯನ್ನಾದರೂ ಸಲ್ಲಿಸೋಣವೆ?
(ಲೇಖಕರು ಸಂಸ್ಕೃತ ವಿದುಷಿ ಮತ್ತು ನಿಕಟಪೂರ್ವ ವಿಧಾನಪರಿಷತ್ ಸದಸ್ಯರು)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ